‘ಶಿಕ್ಷಕರನ್ನು ಭೇಟಿ ಮಾಡಿ’ ಎಂಬುದು ಅರ್ಲಿ ಬರ್ಡ್ನ ಮಾಸಿಕ ಸರಣಿಯಾಗಿದೆ, ಅಲ್ಲಿ ನಾವು ಪಕ್ಷಿಗಳು ಮತ್ತು ಪ್ರಕೃತಿಯ ಸಂತೋಷವನ್ನು ಸಕ್ರಿಯವಾಗಿ ಹರಡುತ್ತಿರುವ ಭಾರತದಾದ್ಯಂತ ಶಿಕ್ಷಕರ ಕೆಲಸವನ್ನು ನಾವು ವೈಶಿಷ್ಟ್ಯಗೊಳಿಸುತ್ತೇವೆ. ಹೊಳೆಮತ್ತಿ ನಿಸರ್ಗ ಮಾಹಿತಿ ಕೇಂದ್ರದ ನಿಸರ್ಗ ಶಿಕ್ಷಣತಜ್ಞ ಅಭಿಷೇಕ್ ಎಂ ಪಾಳ್ಯ ಈ ತಿಂಗಳ ವಿಶೇಷ ಶಿಕ್ಷಣತಜ್ಞರು.
An English version of this interview can be found here.
ನಿಮ್ಮ ಬಗ್ಗೆ, ನೀವು ಎಲ್ಲಿಂದ ಬಂದಿದ್ದೀರಿ ಮತ್ತು ನಿಮ್ಮ ಕೆಲಸದ ಬಗ್ಗೆ ನಮಗೆ ತಿಳಿಸಿ.
ನಮಸ್ಕಾರ, ನಾನು ಅಭಿಷೇಕ್. ನಾನು ಕರ್ನಾಟಕದ ಕಾವೇರಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ ಪಾಳ್ಯ ಗ್ರಾಮದವನು. 2018ರಿಂದ, ನಾನು ಹೊಳೆಮತ್ತಿ ನೇಚರ್ ಫೌಂಡೇಶನ್ ಸಂಸ್ಥೆಯು ಮಲೈ ಮಹದೇಶ್ವರ ವನ್ಯಜೀವಿಧಾಮದ ತಪ್ಪಲಿನಲ್ಲಿ ನಿರ್ಮಿಸಿರುವ ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದಲ್ಲಿ ಪ್ರಕೃತಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ, ನಾನು ಸ್ಥಳೀಯ ಸಮುದಾಯಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಗ್ರಾಮ ಪಂಚಾಯತಿ ಸದಸ್ಯರುಗಳಿಗೆ, ಅರಣ್ಯ, ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಇತರೆ ಸರ್ಕಾರಿ ಇಲಾಖೆಗಳಿಗೆ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ನಡೆಸುತ್ತೇನೆ.
ನೀವು ಪಕ್ಷಿಪ್ರೇಮಿಯೇ? ಪಕ್ಷಿ ವೀಕ್ಷಣೆಯ ಬಗ್ಗೆ ಏನು ನಿಮ್ಮನ್ನು ಪ್ರಚೋದಿಸುತ್ತದೆ?
ಹೌದು! ಪ್ರಾರಂಭದಲ್ಲಿ ಪ್ರಾಣಿಗಳ ಮೇಲೆ ಹೆಚ್ಚಿನ ಆಸಕ್ತಿ ಇದ್ದ ನನಗೆ ಅವುಗಳನ್ನು ನೋಡಬೇಕೆಂಬ ಅಸೆಯು ತುಂಬಾನೇ ಇತ್ತು ಆದರೆ ಅವಕಾಶಗಳ ಕೊರೆತೆಯಿಂದ ಅದು ಸಾಧ್ಯವಾಗುತ್ತಿರಲಿಲ್ಲ, ಕೆಲವು ಬಾರಿ ಕಾಡಿನ ಒಳಗೆ ಹೋಗಲು ಅವಕಾಶ ಸಿಕ್ಕಿ ಕಾಡಿಗೆ ಹೋದ ಸಂದರ್ಭದಲ್ಲಿ ಯಾವುದೇ ಪ್ರಾಣಿಗಳ ದರ್ಶನವಾಗದೆ ನಿರಾಸೆಯಿಂದ ಹಿಂದುರಿಗಿದ ಕ್ಷಣಗಳು ಉಂಟು, ಅ ಸಮಯದಲ್ಲಿ ತುಂಬಾ ಬೇಜಾರಿನಿಂದ ಇರುತ್ತಿದ್ದ ನನಗೆ ಪಕ್ಷಿವೀಕ್ಷಣೆಗೆ ಪ್ರೇರೇಪಿಸಿದ್ದು ನನ್ನ ಮಾರ್ಗದರ್ಶಕರಾದ ಶ್ರೀ ಸಂತೋಷ್ ಪಾವಗಡ ರವರು. ಇವರ ಮೂಲಕವೇ ಪಕ್ಷಿಗಳ ಚಲನವಲನಗಳನ್ನು ಗಮನಿಸಲು ಕಲಿತೆ ಹಾಗೂ ಪಕ್ಷಿ ವೀಕ್ಷಣೆಗೆ ಹೆಚ್ಚಿನ ಸಮಯವನ್ನು ಕೊಡಲು ಪ್ರಾರಂಭಿಸಿದೆ.
ಅಷ್ಟರಲ್ಲಿ ಆಗಲೇ ನನಗೆ ತಿಳಿಯದೆ ಪಕ್ಷಿಗಳ ಮೇಲೆ ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೆ. ಪಕ್ಷಿಗಳ ಚಟುವಟಿಕೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದ ನನಗೆ ಹಲವಾರು ವಿಚಾರಗಳು ನನ್ನನು ಪಕ್ಷಿವೀಕ್ಷಣೆಯಲ್ಲಿ ಪ್ರಚೋದಿಸುವಂತೆ ಮಾಡಿತು, ಅದರಲ್ಲಿ ಪ್ರಮುಖವಾಗಿ ನನ್ನ ಸಹೋದರ ಸಂಬಂಧಿಯ ಜಮೀನಿನಲ್ಲಿದ ಕೆರೆಯ ಪಕ್ಕ, ಬಾಗಿದ ಮರದ ಕೊಂಬೆಗಳಲ್ಲಿ ಗೀಜುಗ (Baya Weaver) ಹಕ್ಕಿಗಳು ಗೂಡು ಕಟ್ಟುವ ವಿಧಾನವನ್ನು ಕಂಡು ಆಶ್ಚರ್ಯಗೊಂಡೆನು, ಕೇವಲ ತಮ್ಮ ಕೊಕ್ಕು ಮತ್ತು ಕಾಲುಗಳ ಸಹಾಯದಿಂದ ಅವುಗಳು ನಿರ್ಮಿಸುವ ಆ ಸುಂದರವಾದ ಗೂಡುಗಳು,ಅವುಗಳು ಆಯ್ಕೆ ಮಾಡಿಕೊಂಡಿರುವ ಜಾಗ ,ಇವೆಲ್ಲವವು ನನ್ನನು ಇನ್ನು ಹೆಚ್ಚಾಗಿ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವಂತೆ ಪ್ರೋತ್ಸಾಹಿಸಿತು.
ಪಕ್ಷಿ/ಪ್ರಕೃತಿ ಶಿಕ್ಷಣದಲ್ಲಿ ನೀವು ಯಾವಾಗ ಮತ್ತು ಹೇಗೆ ಆಸಕ್ತಿ ಹೊಂದಿದ್ದೀರಿ?
ಕಾಡಿನ ಪಕ್ಕದಲ್ಲೇ ನನ್ನ ಊರು ಇದ್ದಕಾರಣ ಕಾಡಿನೊಂದಿಗಿನ ನನ್ನ ಒಡನಾಟ ಚಿಕ್ಕ ವಯಸ್ಸಿನಿಂದಲೇ ಉತ್ತಮವಾಗಿತ್ತು. ಶಾಲೆಗೆ ರಜೆ ಇದ್ದ ದಿನಗಳಲ್ಲಿ ಮೇಕೆಗಳನ್ನ ಮೇಯಿಸಲು ನನ್ನ ಸ್ನೇಹಿತ ಕಾಡಿಗೆ ಹೋಗುತಿದ್ದ, ಅವನ ಜೊತೆಯಲ್ಲಿ ನಾನು ಕೂಡ ಕಾಡಿಗೆ ಹೋಗುತಿದ್ದೆ. ಕಾಡಿನ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ಏನೋ ತಳಮಳ, ಯಾವುದಾದರು ಪ್ರಾಣಿ ಬಂದು ನಮ್ಮ ಮೇಲೆ ದಾಳಿಮಾಡಿದರೆ ಏನು ಮಾಡುವುದು ಎಂದು, ಇನ್ನೊಂದು ಕಡೆ ಆ ನಿರ್ಜನವಾದ ಪ್ರದೇಶ, ತಂಪಾದ ಗಾಳಿ, ಎಂದೂ ಕೇಳಿಲ್ಲದ ಹಲವಾರು ಪಕ್ಷಿಗಳ ಕೂಗು ನನ್ನನು ಉಲ್ಲಾಸಪಡಿಸುತಿತ್ತು.
ಯಾವುದೇ ನಿರ್ದಿಷ್ಟ ಗುರಿ, ಮಾರ್ಗದರ್ಶನ ಇಲ್ಲದೆ ಇದ್ದ ನನಗೆ 2013 ರಲ್ಲಿ ನಮ್ಮ ಕಾಲೇಜಿಗೆ ವನ್ಯಜೀವಿಗಳ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಲು ಬಂದಿದ್ದ ವನಜಾಗೃತಿ ಎಂಬ ವನ್ಯಜೀವಿ ಸಂರಕ್ಷಣಾ ತಂಡದ ಪರಿಚಯವಾಯಿತು. ಈಗಾಗಲೇ ವನ್ಯಜೀವಿಗಳ ಕುರಿತು ಅಪಾರ ಆಸಕ್ತಿಹೊಂದಿದ್ದ ನಾನು ಅವರ ನಿರಂತರ ಒಡನಾಟವನ್ನು ಬೆಳೆಸಿಕೊಂಡೆ. ನನ್ನ ಬಿಡುವಿನ ಸಮಯದಲ್ಲಿ ಸ್ವಯಂ ಸೇವಕನಾಗಿ ಅವರೊಂದಿಗೆ ಸೇರಿ, ಅವರು ಮಾಡುತಿದ್ದ ಪರಿಸರ ಸಂರಕ್ಷಣೆ ಚಟುವಟಿಕೆಗಳಲ್ಲಿ ಭಾಗವಹಿಸಿ, ಅವುಗಳ ಮಹತ್ವವನ್ನು ಸ್ಥಳೀಯ ಜನರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಧಾರ್ಮಿಕ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ತಿಳಿಸುತ್ತ, ಜೊತೆಗೆ ನಾನು ಸಾಕಷ್ಟು ಕಲಿಯುತ್ತ ಮುಂದುವರಿದೆ. ಇದರಿಂದಲೇ ಮುಂದೆ ವನ್ಯಜೀವಿ ಸಂರಕ್ಷಣೆ ಕಾರ್ಯದಲ್ಲಿ ನನ್ನನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.
ನಿಮ್ಮ ಶಿಕ್ಷಣದ ಕೆಲಸದ ಮೂಲಕ ನೀವು ಏನನ್ನು ಸಾಧಿಸಲು ಆಶಿಸುತ್ತೀರಿ?
ನಮ್ಮ ಜಿಲ್ಲೆಯನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದದೆ ಇರುವ ಜಿಲ್ಲೆ ಎಂದೆಲ್ಲ ಬಿಂಬಿಸುತ್ತಾರೆ. ವಿಶೇಷವೆಂದರೆ ಕರ್ನಾಟಕ ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯು ಸಂಪತ್ ಭರಿತವಾದ ಅರಣ್ಯಪ್ರದೇಶವನ್ನು, ಅಮೂಲ್ಯವಾದ ಜೀವವೈವಿಧ್ಯತೆಯನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಅದ್ಭುತವಾದ ಜೀವಸಂಕುಲವನ್ನು ಹೊಂದಿರುವ ನಮ್ಮ ಸ್ಥಳೀಯ ಕಾಡಿನ ಮಹತ್ವ ನಮ್ಮಲ್ಲಿ ಕೆಲವರಿಗೆ ಮಾತ್ರ ತಿಳಿದಿದೆ, ವಿಪರ್ಯಾಸವೆಂದರೆ ಹಲವರಿಗೆ ಇದರ ಪ್ರಾಮುಖ್ಯತೆ ಮತ್ತು ಇವುಗಳ ಸಂರಕ್ಷಣೆ ಕುರಿತು ಸರಿಯಾದ ಮಾಹಿತಿ ಇಲ್ಲ .
ಈ ವಿಶೇಷವಾದ ಜೀವವೈವಿಧ್ಯತೆಯನ್ನು ಜನರಿಗೆ ಪರಿಚಯ ಮಾಡಿಕೊಳ್ಳುವುದರೊಂದಿಗೆ ವನ್ಯಜೀವಿ ಹಾಗೂ ಅದರ ಆವಾಸಸ್ಥಾನಗಳು ನಾಶವಾಗದಂತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಸ್ಥಳೀಯ ಜನರಿಗೆ, ಜನಪ್ರತಿನಿಧಿಗಳಿಗೆ, ಧಾರ್ಮಿಕ ಮುಖಂಡರುಗಳಿಗೆ, ಆಸಕ್ತಿ ಮೂಡಿಸುವುದರೊಂದಿಗೆ, ಅವರನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಯಿಸುವುದೇ ನನ್ನ ಆಶಯ.
ಮಕ್ಕಳು ಪಕ್ಷಿಗಳ ಬಗ್ಗೆ ಕಲಿಯುವುದು ಅಥವಾ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವುದು ಮುಖ್ಯ ಎಂದು ನೀವು ಏಕೆ ನಂಬುತ್ತೀರಿ?
ಮಕ್ಕಳು ಪ್ರಕೃತಿಯೊಂದಿಗೆ ತುಂಬಾ ಸುಲಭವಾಗಿ ಹೊಂದಿಕೊಳ್ಳುತ್ತಾರೆ, ಚಿಕ್ಕವಯಸ್ಸಿನಲ್ಲೇ ಅವರಿಗೆ ಪರಿಸರದ ಪರಿಚಯ ಮಾಡಿಕೊಡುವುದರಿಂದ ಅವರಲ್ಲಿ ಪರಿಸರದ ಕುರಿತು ಆಸಕ್ತಿ ಬೆಳೆಸಬಹುದು, ಹಾಗೂ ಮಕ್ಕಳ ಮೂಲಕ ಅವರ ಕುಟುಂಬ ಸದಸ್ಯರಲ್ಲಿ ಬದಲಾವಣೆ ಮೂಡಿಸಲು ಸಹಾಯವಾಗುತ್ತದೆ. ಮಕ್ಕಳಲ್ಲಿ ಆಗುವ ಬದಲಾವಣೆ ಅವರ ಕುಟುಂಬದಲ್ಲಿ, ಶಾಲೆಗಳಲ್ಲಿ, ಉತ್ತಮವಾದ ಪರಿಣಾಮವನ್ನು ಬೀರುತ್ತದೆ.
ಪಕ್ಷಿಗಳ ಬಗ್ಗೆ ಬೋಧಿಸಲು ಯಾವ ಉಪಕರಣಗಳು ಅಥವಾ ಸಂಪನ್ಮೂಲಗಳು ನಿಮಗೆ ಸಹಾಯ ಮಾಡಿವೆ? ನಿಮಗಾಗಿ ಅಸಾಧಾರಣವಾಗಿ ಕೆಲಸ ಮಾಡಿದ ವಿಧಾನವನ್ನು ನೀವು ವಿವರಿಸಬಹುದೇ?
ನಮ್ಮ ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದಲ್ಲಿ ಪಕ್ಷಿಗಳ ಕುರಿತು ಹಾಕಿರುವಂತ ಬೋರ್ಡ್ಗಳಲ್ಲಿ ಪಕ್ಷಿಗಳ ಬಗ್ಗೆ ಚಿಕ್ಕಚಿಕ್ಕ ವಿಶೇಷತೆಗಳನ್ನ ಹಾಕಿದ್ದೇವೆ. ಅದರ ಮುಖಾಂತರ ಮಕ್ಕಳಿಗೆ ನಾವು ಸುಲಭವಾಗಿ ಆ ಪಕ್ಷಿಯ ಬಗ್ಗೆ ತಿಳಿಸುವುದಕ್ಕೆ ಮತ್ತು ಅದರೊಂದಿಗೆ ಮಕ್ಕಳನ್ನ ಸೇರಿಸೋದಕ್ಕೆ ಸಹಾಯ ಆಯ್ತು.
ಅದರ ಜೊತೆಗೆ ಅರ್ಲಿ ಬರ್ಡ್ ತಯಾರಿಸಿರುವಂತಹ ಪಕ್ಷಿ ಕೈಪಿಡಿ ನಮಗೆ ಬಹಳ ಉಪಯೋಗ ಆಗಿತ್ತು. ಅದು ಹೆಚ್ಚಾಗಿ ನಮ್ಮ ಇಲ್ಲಿನ ಸ್ಥಳೀಯ ಪಕ್ಷಿಗಳ ಬಗ್ಗೆನೇ ಮಾಡಿರೋದ್ರಿಂದ ಈ ನಮ್ಮ ಮಾಹಿತಿ ಕೇಂದ್ರಕ್ಕೆ ಭೇಟಿಕೊಡುವ ಅಥವಾ ನಾವು ಸಂಪರ್ಕದಲ್ಲಿರುವಂತಹ ಶಾಲೆಗಳು ನಮ್ಮ ಸ್ಥಳೀಯ ಶಾಲೆಗಳೇ ಆಗಿರೋದ್ರಿಂದ ಇಲ್ಲಿ ಅವರ ಸುತ್ತಮುತ್ತ ಸಿಗುವಂತಹ ಪಕ್ಷಿಗಳ ಬಗ್ಗೆ ತುಂಬಾ ಸುಲಭವಾಗಿ ತಿಳಿಸೋದಕ್ಕೆ ಆ ಒಂದು ಪಕ್ಷಿ ಕೈಪಿಡಿ ಬಹಳ ಉಪಯೋಗಕರವಾಗಿತ್ತು.
ಪಕ್ಷಿಗಳ ಬಣ್ಣ ಆಗಿರಬಹುದು ಅಥವಾ ಅವುಗಳ ಒಂದು ವಿನ್ಯಾಸ ಆಗಿರಬಹುದು. ಇವುಗಳನ್ನ ಮಕ್ಕಳಿಗೆ ಬಹಳ ಸುಲಭವಾಗಿ ತಿಳಿಸೋದಕ್ಕೆ ಮತ್ತು ತುಂಬಾ ಹತ್ತಿರದಿಂದ ನೋಡೋದಕ್ಕೆ ಬೈನಾಕ್ಯುಲರ್ಸ್ ಸಹಾಯ ಆಗಿದೆ. ಅರ್ಲಿಬರ್ಡ್ ನ ಫ್ಲ್ಯಾಶ್ ಕಾರ್ಡ್ಸ್, Birds of Indian subcontinent ನಂತಹ ಕೆಲವೊಂದು ಪುಸ್ತಕಗಳು ಕೂಡ ನಮಗೆ ತುಂಬಾ ಸಹಾಯ ಆಯಿತು.
ಪಕ್ಷಿ/ಪ್ರಕೃತಿ ಶಿಕ್ಷಕರಾಗಿ ನೀವು ಮಹತ್ವದ ಸವಾಲನ್ನು ಎದುರಿಸಿದ್ದೀರಾ, ಅದನ್ನು ಹೇಗೆ ಜಯಿಸಿದ್ದೀರಿ?
ಖಂಡಿತ ಹೌದು. ಪ್ರಾರಂಭದ ದಿನಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾದಂತಹ ಸಂದರ್ಭಗಳು ಬಂತು.
ಮಕ್ಕಳನ್ನು ನಾವು ತಲುಪೋದಕ್ಕೆ, ಅವರೊಂದಿಗೆ ಪರಿಸರವನ್ನ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದರೆ ಶಾಲೆಯ ಅಥವ ಅಲ್ಲಿನ ಅಧಿಕಾರಿಗಳ ಅನುಮತಿ ಮುಖ್ಯವಾಗಿ ಬೇಕಾಗಿತ್ತು. ಈ ಸಂದರ್ಭದಲ್ಲಿ ನಾವು ಉನ್ನತ ಮಟ್ಟದ ಅಧಿಕಾರಿಗಳ ಹಾಗೂ ಶಾಲಾ ಶಿಕ್ಷಕರ ಮನವೊಲಿಸಿ ಕಾರ್ಯಕ್ರಮಗಳನ್ನು ಮಾಡಲು ನಮಗೆ ಅವಕಾಶ ಕೊಡಬೇಕೆಂದು ಅನುಮೋದನೆಗಳನ್ನು ಪಡ್ಕೋಬೇಕೆಂದರೆ ಅದು ಬಹಳನೇ ಕಷ್ಟದ ಕೆಲಸ.
ಐದು ವರ್ಷದ ಹಿಂದೆ ನಾನು ಕೆಲಸ ಪ್ರಾರಂಭ ಮಾಡಿದಾಗ ಶಿಕ್ಷಕರಿಂದ ಯಾವುದೇ ಒಂದು ಉತ್ತಮ ರೀತಿಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಯಾವುದೇ ಒಂದು ಕಾರ್ಯಕ್ರಮ ಮಾಡಬೇಕೆಂದರು ನಾವು ಶಾಲೆಗೆ ಹೋಗಿ ತುಂಬಾ ವಿನಂತಿಮಾಡಿ ನಂತರ ಅನುಮತಿ ಪಡೆದುಕೊಳ್ಳುತ್ತಿದ್ದೆವು. ಆದರೆ ಎರಡು ಮೂರು ವರ್ಷದಿಂದ ನಾವು ಮಾಡಿದಂತಹ ಚಟುವಟಿಕೆಗಳು ಮತ್ತು ಅವರೊಂದಿಗೆ ನಮ್ಮ ಒಂದು ಬಾಂಧವ್ಯ ಇದೆಲ್ಲವನ್ನ ಅವರು ಗ್ರಹಿಸಿ ಈಗ ಪ್ರಸ್ತುತದಲ್ಲಿ ಸ್ವತಃ ಅವರೇ ನಮ್ಮನ್ನ ಸಂಪರ್ಕಿಸಿ ಅವರ ಶಾಲೆಗಳಲ್ಲಿ ಕಾರ್ಯಕ್ರಮವನ್ನ ಮಾಡೋದಕ್ಕೆ ಅವರೇ ಮನವಿ ಮಾಡಿಕೊಳ್ಳುತ್ತಾರೆ.
ನಾವು ಎಲ್ಲಾ ಚಟುವಟಿಕೆಗಳಲ್ಲೂ ಶಿಕ್ಷಕರನ್ನು ಮತ್ತು ಶಿಕ್ಷಣ ಇಲಾಖೆಯನ್ನ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳಲ್ಲಿ ಅವರನ್ನು ಸೇರಿಸಿಕೊಂಡು ಅವರೊಟ್ಟಿಗೆ ನಿರಂತರವಾದ ಒಂದು ಒಡನಾಟವನ್ನು ಇಟ್ಟು ಕೊಳ್ಳುವ ಮುಖಾಂತರ ಬಂದ ಸವಾಲುಗಳನ್ನು ನಾವು ಎದುರಿಸಬಹುದು
ಪಕ್ಷಿಗಳು/ಪ್ರಕೃತಿಯ ಬಗ್ಗೆ ಮಕ್ಕಳಿಗೆ ಕಲಿಸುವಲ್ಲಿ ನೀವು ಹೊಂದಿರುವ ಯಾವುದೇ ಸ್ಮರಣೀಯ ಕ್ಷಣ ಅಥವಾ ಅನುಭವವನ್ನು ಹಂಚಿಕೊಳ್ಳಿ. ನಿಮ್ಮ ದೃಷ್ಟಿಕೋನವನ್ನು ರೂಪಿಸಿದ ಯಾವುದೇ ಒಳನೋಟವುಳ್ಳ ನಿದರ್ಶನವನ್ನು ನೀವು ನೆನಪಿಸಿಕೊಳ್ಳಬಹುದೇ?
ನಾನು ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದಲ್ಲಿ ಪ್ರಕೃತಿ ಶಿಕ್ಷಕನಾಗಿ ಕಾರ್ಯ ನಿರ್ವಯಿಸುವ ಪ್ರಾರಂಭದ ದಿನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆದು ಕೊಂಡು ಶಾಲೆಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳನ್ನು ನಮ್ಮ ಮಾಹಿತಿ ಕೇಂದ್ರಕ್ಕೆ ಕರೆದುಕೊಂಡು ಬರುವಂತೆ ಮನವಿ ಮಾಡಿಕೊಳ್ಳುತ್ತಿದ್ದೆ, ಹೀಗೆ ಒಂದು ಶಾಲೆಗೆ ಹೋದಾಗ ಆ ಶಾಲೆಯ ಮುಖ್ಯೋಪಾಧ್ಯಾಯರು ನಮಗೆ ಸರಿಯಾಗಿ ಸ್ಪಂದಿಸದೆ ಬಹಳ ತೀಕ್ಷ್ಣವಾಗಿ ಮಾತಾಡಿದರು, ನಂತರದ ದಿನಗಲ್ಲಿ ಬೇರೊಂದು ಶಾಲೆಯ ಮಕ್ಕಳು ನಮ್ಮ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದರು ಅದರಲ್ಲಿ ನಾವು ಮೊದಲೇ ಸಂಪರ್ಕಿಸಿದ ಮುಖ್ಯೋಪಾಧ್ಯರ ಮಗನು ಬಂದಿದ್ದನು, ಆ ಹುಡುಗ ಮನೆಗೆ ಹೋಗಿ ನಮ್ಮ ಮಾಹಿತಿ ಕೇಂದ್ರದಲ್ಲಿ ಕಲಿತ ವಿಚಾರಗಳನ್ನು ತನ್ನ ಪೋಷಕರೊಂದಿಗೆ ಹಂಚಿಕೊಂಡನು, ಇದರಿಂದ ನಮ್ಮ ಕೆಲಸದ ಮೇಲೆ ಬಹಳ ಪ್ರಭಾವಿತರಾದ ಅವರ ತಂದೆ ಅವರೇ ಸ್ವತಃ ನಮಗೆ ಕರೆ ಮಾಡಿ ಅವರ ಶಾಲಾ ಮಕ್ಕಳು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಅವರ ಶಾಲೆ ಮಕ್ಕಳೊಂದಿಗೆ ತಾವು ಕೂಡ ಭೇಟಿ ನೀಡಿ ಬಹಳ ಸಂತೋಷ ಪಟ್ಟರು ಮತ್ತು ನಮ್ಮ ಕೆಲಸವನ್ನು ಮತ್ತಷ್ಟು ಪ್ರೋತ್ಸಾಯಿಸಿದರು. ಅಷ್ಟೇಯಲ್ಲದೆ ಇತರೆ ಶಾಲೆಯ ಮುಖ್ಯೋಪಾಧ್ಯಾಯರುಗಳಿಗೂ ಕೂಡ ಸ್ವತಃ ಅವರೇ ನಮ್ಮ ಬಗ್ಗೆ ತಿಳಿಸಿ ಅವರ ಶಾಲೆ, ಮಕ್ಕಳನ್ನು ನಮ್ಮ ಮಾಹಿತಿ ಕೇಂದ್ರಕ್ಕೆ ಕರೆದುಕೊಂಡು ಹೋಗುವಂತೆ ಉತ್ತೇಜಿಸಿದರು.
ನಿಮ್ಮಲ್ಲಿ ಕಲಿಯುವವರು ಪಕ್ಷಿಗಳು ಮತ್ತು ಪ್ರಕೃತಿ ಆಧಾರಿತ ಕಲಿಕೆಗೆ ಒಡ್ಡಿಕೊಂಡ ನಂತರ ಅವರಲ್ಲಿ ಯಾವುದೇ ಬದಲಾವಣೆಗಳನ್ನು ನೀವು ಗಮನಿಸಿದ್ದೀರಾ? ಹೌದು ಎಂದಾದರೆ, ಅವು ಯಾವುವು? ಇಲ್ಲದಿದ್ದರೆ, ಅದು ಏಕೆ ಎಂದು ನೀವು ಯೋಚಿಸುತ್ತೀರಿ?
ಹೌದು ಖಂಡಿತವಾಗಿಯೂ ನಾನು ಅನೇಕರಲ್ಲಿ ಪರಿಸರದ ಕುರಿತು ತಮ್ಮಗಿದ್ದ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿರುವ ಅನೇಕ ಬದಲಾವಣೆಗಳನ್ನ ಗಮನಿಸಿದ್ದೇನೆ.
ನಮ್ಮ ಮಾಹಿತಿ ಕೇಂದ್ರಕ್ಕೆ ಭೇಟಿನೀಡಿದ ಮಕ್ಕಳಿಗೆ ಪರಿಸರ, ವನ್ಯ ಜೀವಿಗಳಿಗೆ ಸಂಬಂದಿಸಿದ ಹಲವಾರು ಚಟುವಟಿಕೆಗಳನ್ನು ಏರ್ಪಡಿಸುತ್ತೇವೆ ಅದರಲ್ಲಿ ಪಕ್ಷಿವೀಕ್ಷಣೆ ಕೂಡ ಒಂದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪಕ್ಷಿಗಳ ಪರಿಚಯಮಾಡಿಕೊಡುವ ನಿಟ್ಟಿನಲ್ಲಿ ಅವರಿಗೆ ಪಕ್ಷಿವೀಕ್ಷಣೆ ಕಾರ್ಯಕ್ರಮವನ್ನು ಕೈಗೊಂಡೆ, ಆರಂಭದಲ್ಲಿ ಕೇವಲ ಬೆರಳೆಣಿಕೆ ಎಷ್ಟು ಪಕ್ಷಿಗಳನ್ನ ಗುರುತ್ತಿಸುತಿದ್ದ ಅವರು ನಂತರದ ದಿನಗಳಲ್ಲಿ 30ಕ್ಕೂ ಹೆಚ್ಚು ಪಕ್ಷಿಗಳನ್ನ ಗುರುತಿಸಲು ಕಲಿತರು, ಜೊತೆಗೆ ಪಕ್ಷಿಗಳನ್ನ ನೋಡಿ ಸುಮ್ಮನೆ ಹೋಗುತಿದ್ದ ಅವರು ಈಗ ಪಕ್ಷಿಗಳ ಚಟುವಟಿಕೆಗಳು,ದ್ವನಿ,ಆವಾಸಸ್ಥಾನ ಹಾಗೂ ಗೂಡುಕಟ್ಟುವ ವಿಧಾನ ಮುಂತಾದ ಅನೇಕ ಕೌತುಕಕಾರಿ ವಿಚಾರಗಳನ್ನು ಗಮನಿಸುತ್ತಾರೆ.
ಶಿಕ್ಷಕರು ಬಿಡುವಿನ ಸಮಯದಲ್ಲಿ ತಮ್ಮ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಸಿಗುವ ಪಕ್ಷಿಗಳ ಪರಿಚಯವನ್ನು ಮಕ್ಕಳಿಗೆ ತಿಳಿಸುವ ಉತ್ತಮ ಕೆಲಸಗಳನ್ನ ಮಾಡುತ್ತಿದ್ದಾರೆ. ಶಾಲಾ ಶಿಕ್ಷರು ಮತ್ತು ವಿದ್ಯಾರ್ಥಿಗಳಲ್ಲಿನ ಈ ಬದಲಾವಣೆ ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಬಹಳ ಪ್ರಮುಖವಾಗಿದೆ. ಅದರೊಂದಿಗೆ ಇಲ್ಲಿನ ಸ್ಥಳೀಯ ಜನರು, ಪರಿಸರಕ್ಕೆ ಸಂಬಂಧಿಸಿದಂತ ಯಾವುದೇ ವಿಚಾರಗಳಿದರು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಅವುಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮನ್ನು ಸಂಪರ್ಕಿಸುತ್ತಾರೆ.
ಪ್ರಾರಂಭದಲ್ಲಿ ಸ್ವಯಂ ಸೇವಕರಾಗಿ ನಮ್ಮೊಂದಿಗೆ ಪರಿಸರ ಸಂರಕ್ಷಣೆಗೆ ಕೈಜೋಡಿಸಿದ ಅನೇಕರು, ಇದನ್ನೇ ತಮ್ಮ ವೃತ್ತಿಜೀವನವಾಗಿ ಆಯ್ಕೆಮಾಡಿಕೊಂಡು ಪರಿಸರಕ್ಕೆ ತಮ್ಮದೇ ಅದರೀತಿಯಲ್ಲಿ ಅನೇಕ ಕೊಡುಗೆಗಳನ್ನು ನೀಡುತ್ತಿದ್ದಾರೆ.
ನಿಮ್ಮ ಸಹ ಶಿಕ್ಷಕರಿಗೆ ಅಥವಾ ಅವರ ಪ್ರಕೃತಿ ಶಿಕ್ಷಣದ ಪ್ರಯಾಣವನ್ನು ಪ್ರಾರಂಭಿಸುವವರಿಗೆ ನೀವು ಯಾವ ಸಂದೇಶವನ್ನು ಹೊಂದುತ್ತೀರಿ?
ಮಕ್ಕಳಿಗೆ ಅಥವಾ ಸ್ಥಳೀಯರಿಗೆ ಪರಿಸರದ ಬಗ್ಗೆ ಪರಿಚಯಿಸಬೇಕೆಂದಿದ್ದರೆ ಮೊದಲು ಅವರ ಸುತ್ತಮುತ್ತಲಿನ ಜೀವವೈವಿಧ್ಯತೆಯ ಬಗ್ಗೆ ಅವರಿಗೆ ತಿಳಿಸುವುದು ಬಹಳ ಮುಖ್ಯ ಅದರಿಂದ ಅವರು ಪ್ರಕೃತಿಯೊಂದಿಗೆ ಬೇಗನೆ ಬೆರೆಯುತ್ತಾರೆ, ಯಾವುದೋ ಬೇರೆ ಭೂ ಭಾಗದ, ಅಥವಾ ಕಷ್ಟಕರವಾದ ವೈಜ್ಞಾನಿಕ ಹೆಸರುಗಳನ್ನ ಹೇಳಿಕೊಡುವ ಬದಲು ಸ್ಥಳೀಯವಾಗಿ ಅವರು ನೋಡುವಂತ ಅವರದೇ ಪರಿಸರದ ವೈಶಿಷ್ಟ್ಯವನ್ನು ಅವರದೇ ಸ್ಥಳೀಯ ಭಾಷೆಯಲ್ಲಿ ಅವರಿಗೆ ತಿಳಿಸುವುದು ಬಹಳಮುಖ್ಯ ಎನ್ನುವುದು ನನ್ನ ಅಭಿಪ್ರಾಯ.
ಪರಿಸರ ಸಂರಕ್ಷಣೆಯನ್ನುವುದು ಯಾರೋ ಒಬ್ಬರಿಂದ ಕೇವಲ ಒಂದೆರಡು ದಿನಗಳಲ್ಲಿ ಆಗುವ ಕಾರ್ಯವಲ್ಲ ಇದು ಸುದೀರ್ಘವಾಗಿ ಮುಂದುವರಿಯುವ ಪ್ರಕ್ರಿಯೆ ಇದಕ್ಕೆ ಸ್ಥಳೀಯ ಸಮುಧಾಯಗಳ ಸಹಕಾರ ಅತ್ಯಗತ್ಯ, ನಮ್ಮ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಂಡು, ಇತರರಿಗೆ ಯಾವುದೇ ತೊಂದರೆ ಆಗದಂತೆ ಅದನ್ನ ಅರ್ಥಮಾಡಿಸುವುದರೊಂದಿಗೆ ಅವರನ್ನು ನಮ್ಮೊಟ್ಟಿಗೆ ಸೇರಿಕೊಂಡು ಒಟ್ಟಾಗಿ ಕಾರ್ಯನಿರ್ವಯಿಸುವುದು ಬಹಳ ಮುಖ್ಯವಾಗಿದೆ .ಇದರಿಂದ ನಾವು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೋಡಬಹುದು.
ಅಭಿಷೇಕ್, 2022ರಲ್ಲಿ ಯೂತ್ ಕನ್ಸರ್ವೇಶನ್ ಆಕ್ಷನ್ ನೆಟ್ವರ್ಕ್ ಸಂಸ್ಥೆಯವರು ಪ್ರಾರಂಭ ಮಾಡಿದ ಅರ್ಥ್ ಎಜುಕೇಟರ್ ಫೆಲೋಶಿಪ್ನಲ್ಲಿ ಭಾಗಿಯಾಗಿದ್ದರು.
ಈ ಫೆಲೋಶಿಪ್ ಮುಖಾಂತರ ಅವರದೇ ಆದಂತಹ ಒಂದು ಯೋಜನೆ ಮಾಡಲು ಅವಕಾಶ ಸಿಕ್ಕಿತು. “ಜೇನು ಹೀರ್ಕ ನನ್ನು ಸಂರಕ್ಷಿಸಲು ಪ್ರಯಾಣ” ಎಂಬ ಶೀರ್ಷಿಕೆಯ ಈ ಯೋಜನೆಯ ಭಾಗವಾಗಿ ಅವರು ಮಕ್ಕಳಿಗಾಗಿ “ರಂಗ ಮತ್ತು ಅವನ ಪ್ರೀತಿಯ ಕಾಡು” ಎನ್ನುವ ಚಟುವಟಿಕೆಯ ಕಿರುಪುಸ್ತಕವನ್ನು ಪ್ರಕಟಿಸಿದ್ದಾರೆ.